Posts

Showing posts from May, 2021

ಅಶ್ವತ್ಥಾಮ

Image
  ಬಾಳು ಬರಿದಾಗಿದೆ , ಬುದ್ಧಿ ಮಂಕಾಗಿದೆ  ಕಣ್ಣೆರಡು ಸಾಲದೇ ಈ ನೋವಿಗೆ ! ಮೂರನೇ ವಜ್ರ ಕೊಡುತ್ತಿರುವುದು ಕಷ್ಟ  ಸಹಿಸಲು ಬೇಕು ಇನ್ನೊಂದು ಜನನ  ಅಮರಾಸೆಗೆ ಸೋತು ಬೇಡುವರು ಸುಧೆಯ  ವರವನ್ನು ಪಡೆದು ಅನುಭವಿಸುವರೇ ಖುಷಿಯ ? ಯಮಲೋಕದ ದಾರಿ ತ್ಯಜಿಸುವವರೆಲ್ಲ , ನಾನಿಲ್ಲಿ ನರಳುವೆ ಜೀವನವ ಪಡೆದು ! ಪಾಪಕ್ಕೆ ಶಿಕ್ಷೆ ,ಜೀವನದ ಭಿಕ್ಷೆ  ಒಬ್ಬಂಟಿ ಆಗಿರುವೆ ಎನಗಾರು ಇಲ್ಲ ರೋಗವೇ ತಿನ್ನುತಿದೆ ಬಾಳ ಹಸಿ ನೆನಪು ಗಾಯಗಳು ರಕ್ತ ಭೋಜಿಸಿ ತೃಪ್ತಿ ಪಡೆದಿವೆ . ಶಾಪ ದೊರಕಿದೆ ಎನಗೆ ,ಶಾಪ ದೊರಕಿದೆ  ಬಾಳೆಂಬ ನೋವೇ ಶಾಪವಾಗಿದೆ ದೇವರಿಗೆ ಶರಣಾಗದಿರನು ಈ ಮೂರ್ಖ  ಅಶ್ವತ್ಥಾಮ ಸಾಯುವನು ದಿನ ಪ್ರತಿನಿತ್ಯ 

ಮನಸ್ಸಿನ ಮಾತು

Image
  ಜೀವನ ಎಂಬ ರಂಗಿನ ಓಟದಲ್ಲಿ ಜೊತೆಯಾಗಿ ಜೊತೆಗಾತಿ ನಿನ್ನ ನೋಡಿದ ಮರುಗಳಿಗೆ ಮರುಳಾದೆ ಮಾಟಗಾತಿ ನನ್ನ ಮನದ ಕಾಮನಬಿಲ್ಲು ನೀನೇ ಚೆಲುವೆ ನನ್ನ ಕನಸಿನ ಅರಮನೆ ನೀನೆ ಒಲವೆ ನಾನು ನೋಡಿದ ಮೊದಲ ದಿನವೇ ಸೋತೆ ಬರೆದೆ ನಿನ್ನ ಅಂದವ ಹೊಗಳುತ ಪ್ರೇಮ ಕವಿತೆ ಇರುವೆ ನಾ ಎಂದೆಂದೂ ನಿನ್ನ ಜೊತೆ  ನಿನಗಾಗಿ ತೆರೆದಿದೆ ಹೃದಯದ ಖಾತೆ ನಿನ್ನ ಚೆಲುವಿನ ಮನಸ್ಸಿಗೆ ಕನ್ನಡಿಯಾಗುವ ನಾನು ನಿನ್ನ ಮೊಗದ ಚೆಲುವಿಗೆ ಸೋತಿದೆ ಭಾನು  ನನಗಾಗಿ ಹುಟ್ಟಿರುವ ನೀನು ನಿನಗಾಗಿ ಹುಟ್ಟಿರುವೆ ನಾನು

ಸತ್ಯ

Image
  ಕಡಲ ಅಲೆಗಳು ಅಪ್ಪಳಿಸಲು ಕಲ್ಲು ಕರಗುವುದೆ..?  ಕಪ್ಪನೆ ಮೋಡ ಕರಗಬಹುದಾದರೇನು..? ಕಪ್ಪೆಂಬ ಬಣ್ಣ ಅಳಿಸಲಾದೀತೆ...? ಕಣ್ಣು ಇರಲು ಎರಡು, ಕಣ್ಣೀರ ತಡೆಯಲಾದೀತೆ...?  ಹುಚ್ಚು ಬರೀ ಹುಚ್ಚು  ಆಗಸ ಇರುವುದೇ ನೀಲಿ ಬಣ್ಣ  ಬದಲಾಗುವ ಮೋಡಗಳ ಆಟಕ್ಕೆ,  ಮುಗಿಲು ಸ್ಪಂದಿಸದೇ ಇರಲು ಸಾಧ್ಯವೇ..?  ಬೆಳಕು ಬಯಸಿದರೇನು ಕತ್ತಲಾಗದಿರುವುದೇ? ಏನೇನೋ ಯೋಚನೆ ಜೊತೆಗಿನ ತಳಮಳ,  ಅಂತ್ಯವೇ ಕಾಣದ ಮನದ ಗೊಂದಲ ಬುರುಡೆಯಲ್ಲಿಟ್ಟ ಬುದ್ದಿ ಎಂಬ ಬಣ್ಣ  ಒಮ್ಮೊಮ್ಮೆ ಹುಚ್ಚಾಟದಲಿ ಮುಚ್ಚಿದ ಕಣ್ಣ ಮನುಜನ ಕಲ್ಪನೆಗಳಿಗೆ ಕೊನೆಯೇ ಇಲ್ಲ  ಕಲ್ಪಿಸಿಕೊಳ್ಳಲು ಸತ್ಯವು ಮರೆಯಾಗುವದಲ್ಲ ಅರಿತು ನಡೆಯುವುದರೊಳಗೆ ನಲುಗುವುದು ಮುರಿದ ಸಂಬಂಧದೊಳಗೆ ಮನ..

ಅಳಲು

Image
  ಆಗ ನನ್ನೆಲ್ಲಾ ಆಸೆ ಆಕಾಂಕ್ಷೆಗಳ ಹಸಿವು ತ್ರಷೆಗಳ ಅದುಮಿಕ್ಕಿ ಸಾಕಿದ್ದೆ, ನನ್ನ ತುತ್ತನ್ನೂ ನಿನಗಿಕ್ಕಿ, ಚಿಗುರೊಡೆದ ಕನಸ ಕಂಗಳಲಿ ನನ್ನದೂ ಬೆರೆಸಿ ಬೆಳೆಸಿದ್ದೆ ನಿನ್ನ ಈಗಲೋ ಸಮಯವೂ ಉಳಿದಿಲ್ಲ ನಿನ್ನಲ್ಲಿ ನನಗಾಗಿ ಇದೆಯಲ್ಲ ನಿನ್ನ ಚಿಣ್ಣ ನಾಳೆಯ ನೀನಾಗಿ ನಿನ್ನಾಸೆ ಕನಸಲ್ಲೂ ಬೆರೆಯಲು ಆದರೆ ಮಗೂ ನೀ ಮರೆತ ವಿಷಯವೊಂದಿದೆ ನಾಳೆ ನೀನೇ ನನ್ನ ಹಾಗಾದಾಗ ನಿನ್ನ ಗತಿ ನನಗೆ ಪರಿಚಿತ ಬಿಡು ಏಕಾಕೀ ಜೀವನ ಈ ಒಂಟಿತನ  ಇರಲಿ ನಿನಗೂ ಹಾಗಾಗದಿರಲಿ

ಹಾಯ್ಕುಗಳು

Image
  --ತಾಯಿ-- ನವ ಮಾಸದಿ ಉದರದಲಿ ನೋವು  ತಿಂದಾಕೆ ತಾಯಿ ---ಶಿಕ್ಷಕ--- ಗುರಿ ಹೊಂದಿದ ಬಾಳಿಗೆ ದಾರಿ ದೀಪ  ಶಿಕ್ಷಕನಾದ ---ಜೀವನ--- ನೋವು ನಲಿವು ಸೋಲು ಗೆಲುವುಗಳು ಜೀವನದಾಟ

ಕವಿತೆ

Image
  ಕಾಯಕ ನೀ ಮಾಡು  ಮಾಯಕ ಕಾಯ್ತಾನ ಸಾಯಾಕ ಬಂದಿವಿ ಹುಟ್ಟಿ ನಾವು ಬಾಯಾಕ ಬಡಿತಿದಿ ನಾಯಂಗ ಬೊಗಳಿದಿ ಗಾಯದ ಬ್ಯಾನುಂಡು ಸತ್ತಿ ನೀನು ಹುಸಿಯಾಕ ನುಡಿತಿದಿ ಮಸಿಯಾಕ ಬಳಿತಿದಿ ಬಿಸಿದುಂಡುಬಾಯಿ ಸುಟುಗೊಂಡಿ ನೀನು ಹೋದದ್ದು ಬರದಲ್ಲ ಬಂದದ್ದು ನಿಲ್ಲಲ್ಲ ಬಂದೋಗ ಬಾಳ್ ಪೂರಾ ಅಳ್ತಿ ನೀನು ಸಂಕಟ ತರುವುದರ ಸಂಗ್ಯಾಕ ಮಾಡಿದಿ ಸಂಸಾರ ಸಂತಿಯ ನೆಚ್ಚಿ ನೀನು ನಂದ್ಯೋಗ ದೀಪಕ್ಕ ಮಂದ್ಯಾಕ ಬಳ್ಯಾರ ಸಂದ್ಯಾಕ ಬಿಟ್ಟಿಲ್ಲ ಸುಳ್ನುಡಿಗೆ ನೀನು ಬಿಮ್ಮನೆ ಇರತಾರ ಗುಮ್ಮನ ಗುಸುಕಂಗ ನಮ್ಮೋರೆನ್ನೋರೆ ಎರವರು ನೋಡ ಸುಮ್ಮನೆ ಕುಂತವನ ಬೊಮ್ಮೇನು ಮಾಡಿಲ್ಲ ಸುಮ್ಮಿದ್ದು ಸುರಲೋಕ ಸುಟ್ಟಾರ ನೋಡ ನಾಳಿನ ಕೂಳಿಗಿ ಜೋಳಿಗಿ ಒಡ್ಡಿದಿ ಕಾಳಿಲ್ಲ ಬ್ಯಾಳಿಲ್ಲ ಹೊಟ್ಟಿನೊಳಗ ಮ್ಯಾಳಿಗಿ ಜರುದು ನಡುಬೆನ್ನ ಮುರಿದು ಬುಡದಿಂದ ಉಸಿರು ಹೊರಗೋಗ್ಯಾದ ನೋಡ ಹೊಂಟಿದಿ ಏಕಾಂಗಿ ಕಂಟಿಯ ದಾರ್ಯಾಗ ಬಂಟತನ ಬೇಕೋ ಬಯಲಾಗಾಕ ನೆಂಟ ನಿನಗೆ ನೀ ಕುಂಟು ನೆವಯಾಕೊ ನೆಂಟಸ್ತನ ಬೆಳಸು ಎದೆಹಾಡೊಳಗ

ಕಾನನ

Image
  ಪಟ್ಟಣದಲ್ಲಿ ಸದಾ ದುಡಿಯುತ್ತಿರಲು ಜೀವನವೆಂದರೆ ಇಷ್ಟೇನಾ ಎಂದೆನಿಸಿದೆ! ಅದೇ ಕೆಲಸ, ಅದೇ ಜೀವನ ಸಾಕಾಗಿ ನವೀನತೆಗಾಗಿ ಮನಃ ಬಯಸಿದೆ. ಬರಹದ ಜೊತೆ ಪ್ರವಾಸ ಛಾಯಾಗ್ರಹಣವು ನನ್ನ ಎರಡು ಇಷ್ಟದ ಕೆಲಸಗಳಾಗಿವೆ. ಇವೆರಡರಲ್ಲಿಯೇ ಪೂರ್ಣಪ್ರಮಾಣವಾಗಿ ತೊಡಗಿಕೊಳ್ಳಲೆಂದೇ ಸಂಚಾರಿಯಾಗಿರುವೆ. ನನಗೆ ಸದಾ ಸ್ಪೂರ್ತಿಯಾಗಿರುವುದೇ ಪ್ರಕೃತಿಯ ಹೃದಯವಾದ ಹಸಿರ ಕಾನನ. ಅಲ್ಲಿಗೆ ಹೋಗಲೇ ಬೇಕು ಇಲ್ಲದಿದ್ದರೆ ಶಾಂತಿಯಿಂದಿರುವುದಿಲ್ಲ ನನ್ನಯ ತನು ಮನ.      

ಇಳಿಯುವಿಕೆ

Image
  ಎತ್ತರಿಸಿದ ಕಾಲುಗಳು, ಕೈಗಳು ಇನ್ನೂ, ನನ್ನ ನೆಲವು, ಬೆಟ್ಟದ ಕೆಳಗೆ ನೀರಿಗೆ, ಪಾಪ ಮನಸ್ಸಿದೆಯೊ; ಗಾಳಿ ಗಾಳಿಯ ಮೂಲಕ ಹೋಗುದೆನು ತೀವ ಇನ್ನು ಹೆಚ್ಚು ವೇಗವಾದ, ಊರ್ಜಿತ ಹೊಂದಿರುವ ಹೃದಯದವರೆಗೆ ಉಸಿರಿನ ನಗು, ಗಂಟಲು ಕೂಗು; ತಾರೆಗಳ ನೋಟ, ಹಕ್ಕಿಗಳೆ, ನಾನು ಹಾರುತ್ತಿದೆನೆ ಇದು ನನ್ನ ಸಂತೋಷವೇ? ಹಕ್ಕಿಗಳೇ ನಾನು ಹಾರುವೆನು; ಚಿನ್ನದ ಕ್ಷಣ ಹಂಚಿಕೆಗಾಗಿ ಗಾಳಿಯಲ್ಲಿ ನಿಮ್ಮ ಗರಿಗಳ ಜೀವನ -ಪ್ರಜ್ವಲ್ ಡಿ   ಮನುಷ್ಯ ಹಾರಲು ಸಾಧ್ಯವಾದಾಗ ಅವನ ಸಂತೋಷವನ್ನು ನಾನು ವ್ಯಕ್ತಪಡಿಸುತ್ತಿದ್ದೇನೆ.

ಜೀವನ

Image
  ಮೂರೇ ದಿನದ ಜೀವನ ಯಾಕೆ ಬೇಕು ಹಗೆತನ...? ಮೆರೆಯ ಹೊರಟು ದೊಡ್ಡತನ ಕಾಣದಿರಲಿ ಸಣ್ಣತನ

ಕುರಿಯಂತಾದ ಹುಲಿ

Image
  ಅಮ್ಮನ ಮಾತನು ಕೇಳಲು ಬಯಸದ ಹುಲಿಮರಿ ಒಂದು ದಾರಿಯು ತಪ್ಪಿತ್ತು ಹುಲಿ ಎಂದರಿಯದೆ ಘರ್ಜನೆ ಮರೆತು ಮಂದೆಯ ಸೇರಿ ಕುರಿಯಂತಾಗಿತ್ತು ಕಾಡಲಿ ಮೇಯಲು  ಕುರಿಗಳು ಬಂದು ನೀರನು ಕುಡಿಯಲು  ಹುಲಿಮರಿ ನಿಂತಿತ್ತು ದೂರದಿ ಕಂಡ ಹುಲಿಮರಿಯನ್ನ ಹಾರುತ ಬಂದು ಅಮ್ಮನೆ ಹಿಡಿದಿತ್ತು ಹೆದರಿದ ಹುಲಿಮರಿ ಅಮ್ಮನ ಕಂಡು ಘರ್ಜಿಸಲಾಗದೆ ಮೇ ಮೇ ಅಂದಿತ್ತು ನೀರಲಿ ಅದರ ಮುಖವನು ತೋರಿಸಿ ಹುಲಿ ನೀ ಎಂದು ಘರ್ಜಿನೆ ಕಲಿಸಿತ್ತು

ಕೊತ್ತಿ ಮರಿ

Image
  (ಶಿಶು ಗೀತೆ) ಅತ್ತ ಇತ್ತ ಎತ್ತಿ ಎನ್ನ ನೋಡ ಬೇಡ ಕತ್ತ ಸುತ್ತ ಮುತ್ತ ನೀಡಿ ಹಾಡ ಬೇಡ ಮತ್ತೆ ಮತ್ತೆ ಇತ್ತ ಬರಲು ಹೋಗ ಬೇಡ  ಸುತ್ತಿ ಸುತ್ತ ಇತ್ತ ಮನವ ಕಾಡ ಬೇಡ ಕೊತ್ತಿ ಮರಿ ಹತ್ತಿಯಲ್ಲ ನೀ ಸಾಯಬೇಡ

ಪ್ರತ್ಯುಪಕಾರ

Image
  ಹಳ್ಳಿ ಹುಡುಗನೊಬ್ಬ ಅವನೇ ನಮ್ಮ ಸಿದ್ದ ಕಾಡಿನ ರಸ್ತೆಯಲ್ಲೆ ಶಾಲೆಗೆ ಹೋಗುತ್ತಿದ್ದ ಏನೋ ಶಬ್ದವಾಗಿ ನೋಡಲು ಅಲ್ಲೇ ಇದ್ದ ರೆಕ್ಕೆ ಬಡಿದು ಚೀರುತಿದ್ದ ಕಂಡ ಒಂದು ಹದ್ದ ಹುತ್ತದಿಂದ ಕಾಲ ಸುತ್ತಿ ಎಳೆವ ಸರ್ಪ ಉದ್ದ ಬಿಡಿಸಲದನು ತಾನು ನೋಡಿ ಹಾವ ಒದ್ದ ಹದ್ದು ಮೇಲೆ ಹಾರಿ  ಮಾಡಿತೊಂದು ಸದ್ದ ಹಲವು ದಿನದ ಬಳಿಕ ಅಲ್ಲೇ ಬರುತ ಇದ್ದ ಹಾವ ಕಂಡು ಹೆದರಿ ಓಡುವಾಗ ಬಿದ್ದ ಕಾಲ ಬಳಿ ಇದ್ದ ನಾಗ ಬುಸುಗುಟ್ಟುತಲಿದ್ದ ಹಾರಿ ಬಂದ ಹದ್ದು ಉರಗವ ತುಂಡರಿಸಿದ್ದ ಪ್ರತ್ಯುಪಕಾರಕೆ ವಂದಿಸಿದ ಮರೆಯದೆ ನಮ್ಮ ಸಿದ್ದ

ಮರೆತೆನೆಂದರೂ ಮರೆಯಲಿ ಹ್ಯಾಂಗ…

Image
  ಶಿಕ್ಷಕರ ದಿನಾಚರಣೆ ಬಂತೆಂದರೆ ಸಾಕು ಸಾಲು ಸಾಲು ನೆನೆಪುಗಳು ಮನದಂಗಳದಲ್ಲಿ ಸದ್ದು ಮಾಡಲು ಶುರುಮಾಡುತ್ತದೆ. ಆ ಬಾಲ್ಯ, ಆ ಶಾಲೆ, ಅಲ್ಲಿಯ ಮೇಷ್ಟ್ರು ಕಣ್ಮುಂದೆ ಸರಿದು ಹೋದಂತೆ ಕಣ್ಣಂಚು ಕೂಡ ತೇವವಾಗುತ್ತದೆ. ಮನದ ಪುಟದಲ್ಲಿ ಮೂಡಿದ ಒಂದಷ್ಟು ನೆನಪುಗಳನ್ನು ಇಲ್ಲಿ ಅಕ್ಷರರೂಪ ಪಡೆದಿವೆ. "ಸಾಹಿತಿಯೊಬ್ಬ ಅಧ್ಯಾಪಕ ಆಗೋದು ಕಬ್ಬು ತಿನ್ನಲು ಕೂಲಿ ಕೊಟ್ಟಂತೆ (ತೀನಂಶ್ರೀ)" ಶಾಲೆ ಅಂದ್ರೆ ಜಾಸ್ತಿ ನೆನಪಾಗೋ ಆ ದಿನಗಳು...  ಡೆಸ್ಕ್ ತುಂಬಾ ಲಮಂಗಳ,ಚಂದಾಮಾಮ,ಗಿಳಿವಿಂಡು,ಚಿತ್ರಕಥಾ,ಬಾಲಮಿತ್ರ!  ಕ್ಲಾಸಲ್ಲಿ ಜಾಸ್ತಿ ಮಾತಾಡೋರೆ ಲೀಡರ್ ,ಸ್ಥಳ ಬಿಟ್ಟವರು, ನಕ್ಕಿದ್ದು (ಎರಡನೇ ಸಲ)... ಜಗಳವಾಡಿದವರು (ಹುಡುಗರು ಮಾತ್ರ )!! ಪಕ್ಕದಲ್ಲಿರೋರಿಗೆ ಹೊಟ್ಟೆನೋವು, ತಲೆನೋವು ಬಂದ್ರೆ ನಾವೇ ಮನೆಗೆ ಬಿಟ್ಟು ಬರೋ ತವಕ... ಮಾಷ್ಟರ್ ಹೊಡೆದ್ರೂ, ಕಿವಿ ಚಿವುಟಿದರೂ ಆ ನೋವು, ಅವಮಾನ ಪೀಟಿ ಕ್ಲಾಸ್ ಬೆಲ್ ಆಗೋ ತನಕ.... ಅಪ್ಪಿ ತಪ್ಪಿ ಯಾರಾದ್ರೂ ಸರ್ ಆವತ್ತು ಶಾಲೆಗೇ ಬರದಿದ್ರೆ ಅಂದಿನ ಆ ಖುಷಿ ಕೇಳಬೇಕಾ .... ದೊಡ್ದೊರಾಗೋ ತನಕಾನೂ ಅದೇ ಮನಸ್ಥಿತಿ,- " ಸಿಕ್ಕ ಸಿಕ್ಕಲ್ಲಿ ಸಿಕ್ಕಸಿಕ್ಕವರ ಶಿಕ್ಷಿಸುವವನೇ ಶಿಕ್ಷಕ " ಅವರೆಲ್ಲ ಕಡೆದ ಶಿಲ್ಪಗಳು ನಾವು..ಮನದಂಗಳದಲ್ಲಿ ಸರಿದುಹೋದ ಎಲ್ಲ ಟೀಚರ್ಸ್ ಗೂ "happy teachers day"   ಎಲ್ಲೋ ಅವರಿಗೇ ಗೊತ್ತಿಲ್ಲದೇ ಕಡೆದ ಶಿಲ್ಪಗಳು ನಾವು..ನಾ...

ಬಾಲ ಕಾರ್ಮಿಕ ಪದ್ಧತಿಯು ಭೂತದಂತೆ

Image
  ಖುಷಿಯಿಂದ ನಲಿದು, ಆಟವಾಡುತ ಬೆಳೆಯಬೇಕಾದ ಮಕ್ಕಳನ್ನು ದುಡಿಯಲು ಕಳುಹಿಸುವುದು ಸರಿಯೇನು? ಓದಲು ಇಚ್ಛೆ ಇರುವ, ಏನನ್ನೂ ಅರಿಯದ ಪುಟಾಣಿಗಳಿಂದ ದುಡಿಸಿಕೊಳ್ಳಲು ಮನಸ್ಸಾದರೂ ಹೇಗೆ ಬರುವುದೆಂದು ನಾ ಅರಿಯೆನು! ನಾವೆಲ್ಲರು ಒಗ್ಗಟ್ಟಿನಿಂದ ಹೋರಾಡಿ ಮಕ್ಕಳ ಭವಿಷ್ಯಕ್ಕಾಗಿ "ಬಾಲ ಕಾರ್ಮಿಕ ಪದ್ಧತಿ" ಎಂಬ ಭೂತವನ್ನು ಒದ್ದು ಓಡಿಸಬೇಕಿದೆ. ಇದೆಲ್ಲವನ್ನು ತಡೆಯಲೆಂದೇ "ಒಕ್ಕೂಟ ರಾಷ್ಟ್ರಗಳ ಅಂಗವಾಗಿ" "ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು" ಸ್ಥಾಪನೆಯಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಈ ದಿನವನ್ನು "ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನವೆಂದು" ಕರೆಯುತ್ತದೆ. ಇದು ಕಾರ್ಮಿಕರ ಒಳಿತಿಗಾಗಿ ಕೆಲಸ ಮಾಡಿದರೂ ಮುಖ್ಯವಾಗಿ "ಬಾಲ ಕಾರ್ಮಿಕ ಪದ್ಧತಿಯ" ವಿರುದ್ಧವಾಗಿದೆ.

ಕೊರೋನಾ ಮತ್ತು ಶಾಲೆ

Image
  ಕೊರೋನಾ ಬಂತು ಶಾಲೆ ಮುಚ್ಚಿತು ಪುಟ್ಟನು ಖುಷಿ ಖುಷಿಯಾದನು ಹೊಂವರ್ಕ್ ಇಲ್ಲ ಬಾಯಿ ಪಾಠವಿಲ್ಲ ಸದಾ ಟಿವಿ ಮೊಬೈಲ್ ಗೇಮ್ಸ್ ಊಟ ಬೇಡ ಅಮ್ಮನೂ ಬೇಡ ದಿನಗಳು ಉರುಳಿತು ಪುಟ್ಟನಿಗೆ ಬೇಸರವಾಯಿತು ಯಾರನ್ನೂ ನೋಡಲಾಗುತ್ತಿಲ್ಲ  ಯಾರನ್ನೂ ಮಾತನಾಡಿಸಲಾಗುತ್ತಿಲ್ಲ ಪುಸ್ತಕ ಪೆನ್ಸಿಲ್ ಪೆನ್ನು ಬೇಕು  ಡ್ರಾಯಿಂಗ್ ಬರೆಯಬೇಕು ಅಮ್ಮ ಸ್ಕೂಲ್ ಬ್ಯಾಗು ಮೇಲಿಟ್ಟಳು ಕೊರೋನಾ ಭೀತಿಯಿಂದ ಕೊರೋನಾ ಅಂಟು ರೋಗ  ಎಲ್ಲಿ ಅಂಟಿ ಕೊಳ್ಳುವುದೊ ಚಿಂತೆ ಮಕ್ಕಳ ಮನಸು ಮಂಗನ ಮನಸು ಒಮ್ಮೆ ಸ್ಕೂಲ್ ಬೇಕು ಮತ್ತೊಮ್ಮೆ ಸ್ಕೂಲ್ ಬೇಡ ಹಠಕ್ಕೆ ಬಿದ್ದರೆ ಸಂಭಾಳಿಸುವುದು ಕಷ್ಟ  ದಿನೇ ದಿನೇ ಕೊರೋನಾ ಅರ್ಭಟಿಸುತ್ತಿದೆ ಮಕ್ಕಳ ಅಭ್ಯಾಸ ಕುಂಟಿತಗೊಳ್ಳುತ್ತಿದೆ ಶಾಲೆಗೆ ಕಳುಹಿಸಿದರೆ ಮಕ್ಕಳ ಕೂಟ ಕ್ವಾರೆಂಟೇನ್ ತಪಾಸಣೆ ಕಾಟ        ಇದ್ದವರಿಗೆ ವಾಟ್ಸಾಪ್ ಆನ್‍ಲೈನ್ ಪಾಠ ಇಲ್ಲದವರಿಗೆ ಆದೇ ಓಟ ಎಲ್ಲರಿಗೂ ಓದು ಬೇಕು ಆರೋಗ್ಯ ಗಮನಿಸಬೇಕು ವಾಟ್ಸ್ ಆಪ್ ಪಾಠ ಬೇಕು  ಸಿಡಿ ಡಿವಿಡಿ ಪ್ಲೇಯರ್ ಪಾಠ ಕೇಳಬೇಕು ಇ-ಸ್ಕೂಲ್ ನಡೆಸಬೇಕು ಯಾ ಪ್ರಮುಖ ತರಗತಿಗಳು ನಡೆಯಬೇಕು  ತಪ್ಪಿದರೆ ತಿಂಗಳೊಂದರಂತೆ ಪ್ರತಿ  ತರಗತಿಯು ನಡೆಯಬೇಕು  ಕೊರೋನಾ ತೊಲಗಬೇಕು ಮಕ್ಕಳು ಜಾಣಮರಿಗಳಾಗಬೇಕು

ಮಕ್ಕಳ ಕಥೆ: ವೈದ್ಯನಾದ ಬೆಕ್ಕು

Image
  ಹಳ್ಳಿಯೊಂದರಲ್ಲಿ ಒಂದು ಬೆಕ್ಕು ವಾಸವಾಗಿತ್ತು. ಬಹಳ ದಿನಗಳಿಂದ ಆಹಾರ ಸಿಗದೆ ಅದು ಬಡಕಲಾಗುತ್ತಾ ಬಂದಿತ್ತು. ಈ ಕಾರಣ ಅದು ತನ್ನ ಸ್ಥಿತಿಯ ಬಗ್ಗೆ ಚಿಂತೆ ಮಾಡಲು ಪ್ರಾರಂಭಿಸಿತು. ಅಲ್ಲಿದ್ದ ಮರವೊಂದರ ಮೇಲೆ ಕೆಲವು ಹಕ್ಕಿಗಳು ಗೂಡು ಕಟ್ಟಿ ವಾಸಿಸುತ್ತಿದ್ದವು. ಒಮ್ಮೆ ಅವುಗಳಲ್ಲಿ ಒಂದು ಹಕ್ಕಿಗೆ ಆರೋಗ್ಯ ಕೆಟ್ಟಿತು. ಚಿಕಿತ್ಸೆ ಪಡೆಯಲು ಅದು ವೈದ್ಯರನ್ನು ಹುಡುಕುತ್ತಿತ್ತು.  ಈ ವಿಷಯ ತಿಳಿದ ಬೆಕ್ಕು ತನ್ನ ಹಸಿವು ತೀರಿಸಿಕೊಳ್ಳಲು ಒಂದು ಉಪಾಯ ಮಾಡಿತು. ವೈದ್ಯರಂತೆ ಬಿಳಿ ಬಣ್ಣದ ನಿಲುವಂಗಿ ಮತ್ತು ಕನ್ನಡಕ ಧರಿಸಿ ರೋಗ ಬಂದಿರುವ ಹಕ್ಕಿಯ ಬಳಿಗೆ ಹೋಯಿತು. ಆ ಹಕ್ಕಿಯ ಮನೆ ಬಾಗಿಲನ್ನು ಮೆಲ್ಲಗೆ ತಟ್ಟಿತು. ಆಗ ಅಲ್ಲಿದ್ದ ಹಕ್ಕಿಗಳು ಬಾಗಿಲ ಕಿಂಡಿಯಿಂದ ನೋಡಿದಾಗ ಬೆಕ್ಕೊಂದು ನಿಂತಿರುವುದು ಕಂಡಿತು. ಆ ಬೆಕ್ಕಿಗೆ ಅವುಗಳು ಬಂದ ಕಾರಣ ಕೇಳಿದವು.  ಆಗ ಬೆಕ್ಕು ಮೃದು ಮತ್ತು ಪ್ರೀತಿಯ ಮಾತುಗಳಿಂದ 'ನಾನು ನಿಮ್ಮ ನೆರೆಮನೆಯಲ್ಲಿರುವ ವೈದ್ಯ. ನಿಮ್ಮಲ್ಲಿ ಒಬ್ಬರಿಗೆ ಆರೋಗ್ಯ ಸರಿಯಿಲ್ಲವೆಂದು ನನಗೆ ತಿಳಿಯಿತು. ಅವರಿಗೆ ಚಿಕಿತ್ಸೆ ನೀಡಲು ಬಂದಿರುವೆ. ರೋಗಿಗಳಿಗೆ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ. ಅದಕ್ಕಿಂತಲೂ ಶ್ರೇಷ್ಠ ಕಾರ್ಯ ಯಾವುದೂ ಇಲ್ಲವೆಂದು ನಂಬಿದ್ದೇನೆ'ಎಂದಿತು.  ಹಕ್ಕಿಗಳು ಬೆಕ್ಕಿನ ಮಾತುಗಳನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಅವುಗಳು ಬೆಕ್ಕಿಗಿಂತಲೂ ಚುರುಕಾಗಿದ್ದವು. ಬೆಕ್ಕಿಗೆ ಅವು, 'ನಿನ್...

ಒಲವು

Image
  ಚೈತ್ರ ತಂದ ಚಿಗುರಿನ ಹಾಗೆ ನಿನ್ನ ಸ್ನೇಹವು ಮಳೆ ಹನಿಗೆ ಚಿಗುರೊಡೆದಿದೆ ಮನದಲಿ ಒಲವು ಹೊಸತಾಗಿ ಮೂಡಿದೆ ಈ ಹೃದಯದಲಿ ಪ್ರೀತಿಯ ಸೆಳವು ನಿನ್ನ ಕಾಣಲು ಪ್ರತಿಕ್ಷಣವು ಆಸೆ ಪಡುತಿದೆ ನನ್ನೀ ಮನವು ಅತಿವೃಷ್ಟಿಯ ಮಳೆಯಂತೆ ಸುರಿಸಬೇಡಾ ನಿನ್ನ ಪ್ರೇಮವ ಸುತ್ತಲೂ ಪಚ್ಚೆ ಹಸಿರಿರುವಂತೆ ಹರಿಸು ಒಲವಿನ ಸುಧೆಯ ಬಯಕೆಯೆಂಬ ಮೋಹಕೆ ಆತುರದಲಿ ಬಿದ್ದು ಕೊರಗದಿರಲಿ ಮನವು ಮದುವೆಯೆಂಬ ಶಾಸ್ತ್ರದಲಿ ಒಂದಾಗಲಿ ನಮ್ಮಿಬ್ಬರ ತನುವು ಅರಿಯಬೇಕು ಹಿರಿಯರ ಆಶೀರ್ವಾದವೇ ಪ್ರೀತಿಗೆ ಗೆಲುವು                                                ಕೊನೆತನಕ ಹೀಗೆ ಜೊತೆಯಾಗಿರಲಿ‌ ನಮ್ಮಯ ಒಲವು

ಪರವಶ

Image
  ಪರವಶವಾಗಿದೆ ನನ್ನ ಮನ  ನಿನ್ನಯ ಮೋಡಿಗೆ  ಸುತ್ತಲು ಆವರಿಸಿದೆ ನಿನ್ನಯ  ಛಾಯೆಯ ಬೆಳಕು ನನ್ನ ಕಣ್ಣಿನೊಳಗೆ ಹೃದಯ ಬಾಗಿಲ ಬಡಿದು ಮಲಗಿದ್ದ ನನ್ನ ಮನಸನ್ನು ಮುಟ್ಟಿ  ಒಳ ಬರಲು ನೀ ಪ್ರವೇಶ ಕೇಳುತಿರುವೆ.. ನಿನ್ನ ಆಗಮನಕ್ಕೆ ಕಾಯುತಿದೆ ಈ ಮನ  ಹಸಿಲೆರೆಯು ಚಿಗುರುತಿದೆ ನನ್ನ ಮನದಲ್ಲಿ ಹೊಸ ಆಸೆಯು ಮೂಡುತಿಹುದು ಪ್ರೀತಿಯ ನಿವೇದನೆ ಮಾಡುವಂತಹ ವಯಸ್ಸು ನನ್ನ ಎಲ್ಲ ಆಸೆಗೂ ನಿನ್ನ ನಗುವಿನ ಮುದ್ರೆ ಹಾಕಿ  ಪರಿಗಣಿಸು.....

ನಿನ್ನಂಥ ಹುಡುಗಿ

Image
  ಸೂರ್ಯನ ಕಿರಣದ ನಿನ್ನ ರೂಪ ಚಂದ್ರನ ಬೆಳದಿಂಗಳ ಪ್ರತಿರೂಪ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ. ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ಕೇಳೆನು ಬೇರೇನನು ನಿನ್ನ ಪ್ರೀತಿಯ ಹೊರತು ಪ್ರತಿ ಕ್ಷಣವು ಪ್ರತಿ ಕಣವು ಹೋಗಿದೆ ನಿನ್ನಲ್ಲಿ ಬೆರೆತು ಪ್ರೀತಿಯ ಸ್ಪೂರ್ತಿಯ ತದರೂಪ ಬಾಳಿನ ಜ್ಯೋತಿಯ ಸ್ವರೂಪ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ಸೆರೆಯಾದೆನು ನಿನ್ನ ಪ್ರೀತಿಗೆ ನಾನಿಂದು ಮರೆಯಾದೆನು ನನ್ನಿಂದಲೇ ನಾನಿಂದು ಕನಸಿನ ಪರಿಕಲ್ಪನೆಯ ಆಲಾಪ ಹೆಚ್ಚಾಯಿತು ನಿನ್ನಿಂದಲೇ ಸಲ್ಲಾಪ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ಸೂರ್ಯನ ಕಿರಣದ ನಿನ್ನ ರೂಪ ಚಂದ್ರನ ಬೆಳದಿಂಗಳ ಪ್ರತಿರೂಪ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ

ಉತ್ತರವು ನೀನಾಗುವೆ

Image
  ತುಸು ಮೆಲ್ಲನೆ ತುಸು ಮೆಲ್ಲನೆ  ನಗುತ ಸಾಗುವೆಯ ನನ್ನೊಲವೆ.. ಅವಸರದ ನನ್ನೆದೆಯ ಕನಸಿಗೆ ಪ್ರೇಮದ ಉತ್ತರವು ನೀನಾಗುವೆ... !!ತುಸು ಮೆಲ್ಲನೆ!! ಒಲುಮೆಯ ಸೌಜನ್ಯದ ಹೆಜ್ಜೆಗೆ  ನಾ ಸಂಭ್ರಮದಿ ಜೊತೆಯಾಗುವೆ ಒಯ್ಯಾರದ ಬಿನ್ನಾಣದ ನಡಿಗೆಗೆ  ನಾ ಮೋಹದಿ ಹಿಂಬಾಸುವೆ.. !!ತುಸು ಮೆಲ್ಲನೆ!! ತೂಗುವ ತಂಗಾಳಿಯು ರಮಿಸಿದೆ ಸ್ನೇಹದ ಹಾದಿಗೆ ಹಾರೈಸಿದೆ ಉಲ್ಲಾಸದ ಅಲೆಯು ಬೀಸುತಿದೆ ಪ್ರೀತಿಯ ಹೆಸರೊಂದೆ ಕೇಳುತಿದೆ.. !!ತುಸು ಮೆಲ್ಲನೆ!! ಉನ್ನಾದದ ಬಯಕೆಯು ಉದಿಸುತಿದೆ ಹೃದಯದ ಕರೆಗೆ ದನಿಗೂಡಿಸಿದೆ ಸಂತಸದ ಮಳೆಯು ಸುರಿಯುತಿದೆ ಹೊಸ ಬಾಳಿಗೆ ಸ್ವಾಗತ ಕೋರುತಿದೆ.. !!ತುಸು ಮೆಲ್ಲನೆ!! ವಾತ್ಸಲ್ಯದ ತಾಳವು ಝೇಂಕರಿಸುತಿದೆ ಮಮತೆಯ ಬಂಧಕೆ ಹಾತೊರೆದಿದೆ ತುಸು ಮೆಲ್ಲನೆ ತುಸು ಮೆಲ್ಲನೆ  ನಗುತ ಹಿಂತಿರುಗುವೆಯ ನನ್ನೊಲವೆ.. !!ತುಸು ಮೆಲ್ಲನೆ!! ವೈಭವದ ಬಾಳಲ್ಲಿ ನೀ ಸುಖವೆ ಕಾಣುವೆ ಒಲುಮೆಯ ಉಯ್ಯಾಲೆಯಲಿ ಹಿತವಾಗುವೆ ನೋವಿಲ್ಲದ ಬಾಳಿಗೆ ಸಾಕ್ಷಿಯಾಗುವೆ ಅನುರಾಗದ ಗೀತೆಗೆ ದನಿಯಾಗುವೆ..