ಮಕ್ಕಳ ಕಥೆ: ವೈದ್ಯನಾದ ಬೆಕ್ಕು

 


ಹಳ್ಳಿಯೊಂದರಲ್ಲಿ ಒಂದು ಬೆಕ್ಕು ವಾಸವಾಗಿತ್ತು. ಬಹಳ ದಿನಗಳಿಂದ ಆಹಾರ ಸಿಗದೆ ಅದು ಬಡಕಲಾಗುತ್ತಾ ಬಂದಿತ್ತು. ಈ ಕಾರಣ ಅದು ತನ್ನ ಸ್ಥಿತಿಯ ಬಗ್ಗೆ ಚಿಂತೆ ಮಾಡಲು ಪ್ರಾರಂಭಿಸಿತು. ಅಲ್ಲಿದ್ದ ಮರವೊಂದರ ಮೇಲೆ ಕೆಲವು ಹಕ್ಕಿಗಳು ಗೂಡು ಕಟ್ಟಿ ವಾಸಿಸುತ್ತಿದ್ದವು. ಒಮ್ಮೆ ಅವುಗಳಲ್ಲಿ ಒಂದು ಹಕ್ಕಿಗೆ ಆರೋಗ್ಯ ಕೆಟ್ಟಿತು. ಚಿಕಿತ್ಸೆ ಪಡೆಯಲು ಅದು ವೈದ್ಯರನ್ನು ಹುಡುಕುತ್ತಿತ್ತು. 


ಈ ವಿಷಯ ತಿಳಿದ ಬೆಕ್ಕು ತನ್ನ ಹಸಿವು ತೀರಿಸಿಕೊಳ್ಳಲು ಒಂದು ಉಪಾಯ ಮಾಡಿತು. ವೈದ್ಯರಂತೆ ಬಿಳಿ ಬಣ್ಣದ ನಿಲುವಂಗಿ ಮತ್ತು ಕನ್ನಡಕ ಧರಿಸಿ ರೋಗ ಬಂದಿರುವ ಹಕ್ಕಿಯ ಬಳಿಗೆ ಹೋಯಿತು. ಆ ಹಕ್ಕಿಯ ಮನೆ ಬಾಗಿಲನ್ನು ಮೆಲ್ಲಗೆ ತಟ್ಟಿತು. ಆಗ ಅಲ್ಲಿದ್ದ ಹಕ್ಕಿಗಳು ಬಾಗಿಲ ಕಿಂಡಿಯಿಂದ ನೋಡಿದಾಗ ಬೆಕ್ಕೊಂದು ನಿಂತಿರುವುದು ಕಂಡಿತು. ಆ ಬೆಕ್ಕಿಗೆ ಅವುಗಳು ಬಂದ ಕಾರಣ ಕೇಳಿದವು. 


ಆಗ ಬೆಕ್ಕು ಮೃದು ಮತ್ತು ಪ್ರೀತಿಯ ಮಾತುಗಳಿಂದ 'ನಾನು ನಿಮ್ಮ ನೆರೆಮನೆಯಲ್ಲಿರುವ ವೈದ್ಯ. ನಿಮ್ಮಲ್ಲಿ ಒಬ್ಬರಿಗೆ ಆರೋಗ್ಯ ಸರಿಯಿಲ್ಲವೆಂದು ನನಗೆ ತಿಳಿಯಿತು. ಅವರಿಗೆ ಚಿಕಿತ್ಸೆ ನೀಡಲು ಬಂದಿರುವೆ. ರೋಗಿಗಳಿಗೆ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ. ಅದಕ್ಕಿಂತಲೂ ಶ್ರೇಷ್ಠ ಕಾರ್ಯ ಯಾವುದೂ ಇಲ್ಲವೆಂದು ನಂಬಿದ್ದೇನೆ'ಎಂದಿತು. 


ಹಕ್ಕಿಗಳು ಬೆಕ್ಕಿನ ಮಾತುಗಳನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಅವುಗಳು ಬೆಕ್ಕಿಗಿಂತಲೂ ಚುರುಕಾಗಿದ್ದವು. ಬೆಕ್ಕಿಗೆ ಅವು, 'ನಿನ್ನ ಉಪಕಾರ ಮನೋಭಾವಕ್ಕೆ ನಮ್ಮ ವಂದನೆಗಳು. ನೀನು ಬೆಕ್ಕಾಗಿರದಿದ್ದರೆ ನಿನ್ನ ಮಾತುಗಳನ್ನು ನಿಜವೆಂದು ನಂಬುತ್ತಿದ್ದೆವು. ಆದರೆ ಈಗ ನೀನು ನಮ್ಮ ದೃಷ್ಟಿಯಿಂದ ದೂರ ಹೋದರೆ ಮಾತ್ರ ನಮಗೆ ಕ್ಷೇಮವೆಂದು ತಿಳಿಯುತ್ತೇವೆ' ಎಂದವು. 


ನೀತಿ: ಕೊಲ್ಲುವವನು ಕಾಪಾಡುತ್ತೇನೆಂದು ಬಂದರೂ ನಂಬಬಾರದು.

Comments

Popular posts from this blog

kannada motivational thoughts ,