ಕವಿತೆ



 ಕಾಯಕ ನೀ ಮಾಡು

 ಮಾಯಕ ಕಾಯ್ತಾನ

ಸಾಯಾಕ ಬಂದಿವಿ ಹುಟ್ಟಿ ನಾವು

ಬಾಯಾಕ ಬಡಿತಿದಿ

ನಾಯಂಗ ಬೊಗಳಿದಿ

ಗಾಯದ ಬ್ಯಾನುಂಡು ಸತ್ತಿ ನೀನು


ಹುಸಿಯಾಕ ನುಡಿತಿದಿ

ಮಸಿಯಾಕ ಬಳಿತಿದಿ

ಬಿಸಿದುಂಡುಬಾಯಿ ಸುಟುಗೊಂಡಿ ನೀನು

ಹೋದದ್ದು ಬರದಲ್ಲ

ಬಂದದ್ದು ನಿಲ್ಲಲ್ಲ

ಬಂದೋಗ ಬಾಳ್ ಪೂರಾ ಅಳ್ತಿ ನೀನು


ಸಂಕಟ ತರುವುದರ

ಸಂಗ್ಯಾಕ ಮಾಡಿದಿ

ಸಂಸಾರ ಸಂತಿಯ ನೆಚ್ಚಿ ನೀನು

ನಂದ್ಯೋಗ ದೀಪಕ್ಕ

ಮಂದ್ಯಾಕ ಬಳ್ಯಾರ

ಸಂದ್ಯಾಕ ಬಿಟ್ಟಿಲ್ಲ ಸುಳ್ನುಡಿಗೆ ನೀನು


ಬಿಮ್ಮನೆ ಇರತಾರ

ಗುಮ್ಮನ ಗುಸುಕಂಗ

ನಮ್ಮೋರೆನ್ನೋರೆ ಎರವರು ನೋಡ

ಸುಮ್ಮನೆ ಕುಂತವನ

ಬೊಮ್ಮೇನು ಮಾಡಿಲ್ಲ

ಸುಮ್ಮಿದ್ದು ಸುರಲೋಕ ಸುಟ್ಟಾರ ನೋಡ


ನಾಳಿನ ಕೂಳಿಗಿ

ಜೋಳಿಗಿ ಒಡ್ಡಿದಿ

ಕಾಳಿಲ್ಲ ಬ್ಯಾಳಿಲ್ಲ ಹೊಟ್ಟಿನೊಳಗ

ಮ್ಯಾಳಿಗಿ ಜರುದು

ನಡುಬೆನ್ನ ಮುರಿದು

ಬುಡದಿಂದ ಉಸಿರು ಹೊರಗೋಗ್ಯಾದ ನೋಡ


ಹೊಂಟಿದಿ ಏಕಾಂಗಿ

ಕಂಟಿಯ ದಾರ್ಯಾಗ

ಬಂಟತನ ಬೇಕೋ ಬಯಲಾಗಾಕ

ನೆಂಟ ನಿನಗೆ ನೀ

ಕುಂಟು ನೆವಯಾಕೊ

ನೆಂಟಸ್ತನ ಬೆಳಸು ಎದೆಹಾಡೊಳಗ


Comments

Popular posts from this blog

kannada motivational thoughts ,