ಹೊಸ ಕವಿ
ಪದಗಳೆರಡನು ಓದಿ,
ಇವನಾರೋ ಹೊಸ ಕವಿಯು,
ಬರಹ ಬಾಲಿಶವಿಹುದು,
ಶಬ್ದಗಳ ಅರಿವಿಲ್ಲ,
ವ್ಯಾಕರಣ ದೋಷವಿದೆ,
– ಎಂದೆಲ್ಲ ಕೊಂಕನೆಸೆದು,
ಪರದೆಯ ಮೇಲೆ ಬೆರಳೊರೆಸಿ,
ಮುನ್ನಡೆದೀರಿ, ಹುಡುಕುತ್ತಾ-
ಮತ್ತೆ ಪರಿಚಿತ ಹೆಸರ…
ಹೊಸಬನೇನೋ ಅಹುದು. ನನ್ನ-
ಮೊದಲ ಕವನಕ್ಕಿನ್ನೂ ಇಪ್ಪತ್ತರ ಹರೆಯ.
ಕವಿ ಎಂದು ಕರೆಯಿಸುವ ಬಿಂಕವೆನಗಿಲ್ಲ.
ಆದರೂ, ಮನದ ಮೂಲೆಯಲೆಲ್ಲೋ
ತುಡಿವ ಭಾವನೆಗಳಿಗೆ, ಯಾವ ಸರಹದ್ದು?
ಯಾವ ಚೌಕಟ್ಟು? ಯಾರ ಹೆಸರು?
ಒಗಟ ಕೊಟ್ಟರೂ ಬಿಡಿಸಿ ಓದುವವರಿದ್ದರು.
ಈಗ, ಬಿಡಿಸಿ ಕೊಟ್ಟರೂ ಒಲ್ಲದವರಿಗೆ,
ಇನ್ನೆಂತು ಬರೆಯಲಿ…?
ಲೆಕ್ಕವಿಲ್ಲದೆ ಬರೆದು ಎಲ್ಲರ ಕಪಾಟಿನಲ್ಲಿ-
ಬರಿಯ ಹಾಳೆಯಾಗಿರುವುದು ಸಾಕು,
ಬರೆದದ್ದು ನಾಲ್ಕಾದರೂ,
ಎದೆಯ ಹಾಡಾಗಬೇಕು, ಗುನುಗುನುಗ ಬೇಕು,
ಹಿತವಾಗಬೇಕು, ಹಗುರಾಗಬೇಕು.
ಬರೆದವರು ಯಾರೆಂಬ ಹಂಗಿಲ್ಲದೆ…
– ಶ್ರೀನಿವಾಸ ನಾಯಕ್
Comments
Post a Comment