ಯಾವ ಜನುಮದ ಬಂಧ…
ಯಾವ ಜನುಮದ ಬಂಧ ಓ ನನ್ನ ಕಂದ,
ಕಣ್ಸೆಳೆವ ನಿನ್ನಂದ ನನಗೆ ಆನಂದ…
ಮುದಗೊಳಿಸೋ ಮಳೆಯಂತೆ, ಮಳೆಬಿಲ್ಲ ರಂಗಂತೆ,
ಕೋಗಿಲೆಯ ದನಿಯಂತೆ ನೀ ಬಂದೆ ಚಿನ್ನ…
ನೊರೆಹಾಲ ಬಿಳುಪಂತೆ, ಹುಣ್ಣಿಮೆಯ ಹೊಳಪಂತೆ,
ನೀ ತಂದ ಒಲವಿಂದ ಬದುಕೆಷ್ಟು ಚೆನ್ನ…
ಮುದ್ದು ಮದ್ದಿನ ಅಳುವು, ಚೆಲುವು ಚೆಲುವಿನ ನಗುವು,
ತೊದಲು ತೊದಲಿನ ನಿನ್ನ ಮಾತು ಮಕರಂದ…
ಬಗೆಬಗೆಯ ಭಾವದಲಿ, ವಿಧವಿಧದ ಭಂಗಿಯಲಿ,
ಕ್ಷಣಕ್ಷಣವೂ ನಿನ್ನೊಲವು ಚಂದವೋ ಚಂದ…
ಮಮತೆಯ ಮಡಿಲಿನಲಿ, ಮಗುವಾಗಿ ಅನುದಿನವು,
ನನ್ನೆದೆಯ ಈ ಹಾಡು ನೀ ಕೇಳು ಮಗುವೆ…
ನೋವೆಲ್ಲ ನನಗಿರಲಿ, ಸುಖವೊಂದೇ ನಿನಗಿರಲಿ,
ನಿನ್ನೊಳಿತಿಗೆ ಈ ಬಾಳ ಮುಡುಪಾಗಿ ಇಡುವೆ…
– ಶ್ರೀನಿವಾಸ ನಾಯಕ್
Comments
Post a Comment