ತೊರೆದು ಜೀವಿಸಬಹುದೇ?

 


ಏನು ಕಾರಣ ಹೇಳು
ಜೇನಂಥ ನಮ್ಮೊಲವ
ನೀನಿಂದು ಧಿಕ್ಕರಿಸಿ ಮುನ್ನಡೆಯಲು.
ಕನಸೆಲ್ಲ ಕವಲಾಗಿ
ಮನಮಿಡಿದು ಮಡುವಾಗಿ
ನೆನಪೊಂದು ದಿನವೆಲ್ಲ ಕಾಡುತಿಹುದು.

ನೀನಿರಲು ನನ್ನೊಡನೆ
ಬಾನುಲಿಯ ದನಿಯಂತೆ
ಗುನುಗುನುಗು ಗುಂಗಿತ್ತು ಬಾಳಿನಲ್ಲಿ.
ನೀನಗಲಿ ನಡೆದಾಗ
ಸೋನೆಮಳೆ ಸುರಿದಂತೆ
ಜಿನುಗಿತ್ತು ಕಂಬನಿಯು ನೋವಿನಲ್ಲಿ.

ಜೊತೆಯಾಗಿ ಕಳೆದಂತ
ಹಿತವಾದ ಸವಿಘಳಿಗೆ
ಗತವಾದ ಕತೆಯಂತೆ ಕಾಣುತಿಹುದು.
ಸೋತೆನೆಂದರಿಯದಿರು
ಮಿತವಾದ ಬದುಕಿನಲಿ
ಮತ್ತೊಂದು ಮುಂಜಾವು ಮೂಡಬಹುದು.

– ಶ್ರೀನಿವಾಸ ನಾಯಕ್

(ಇದು ಕುಸುಮ ಷಟ್ಪದಿ ಪದ್ಯ)

Comments

Popular posts from this blog