ಒಂದು ಕವನ…
ವರುಷವೆರಡಾಯಿತು ನಾನವಳ ವರಿಸಿ,
ಬದುಕ ಭರವಸೆಗಳ ಏಳು ಹೆಜ್ಜೆ ಇರಿಸಿ.
ಹೃದಯವೆರಡರ ನಡುವೆ ಪ್ರೇಮಗಂಗೆಯ ಹರಿಸಿ,
ನಮ್ಮಿಬ್ಬರ ಬಾಂಧವ್ಯಕೆ ದೈವ ಹರಸಿ.
ಆಗೊಮ್ಮೆ ಹುಸಿಮುನಿಸು ಈಗೊಮ್ಮೆ ತುಸುಕೋಪ,
ಮತ್ತೊಮ್ಮೆ ನಸುನಾಚುವವಳ ನಗುವೆ ಅಂದ.
ನನ್ನವಳ ನುಡಿ ನೇರ, ಮೃದು ಮನಸು, ತಿಳಿ ಹೃದಯ,
ಅವಳೆನ್ನ ಜೊತೆಗಿರಲು ಬದುಕು ಚಂದ.
ಯಾವ ಉಡುಗೊರೆ ಬೇಕು? ಎಂದವಳ ಕೇಳಿದರೆ,
ನಗುತ ನುಡಿದಳು ನಲ್ಲೆ, “ಒಂದು ಕವನ?”
ಯಾವ ಪದಗಳ ತಂದು ಅವಳೊಲವ ಬಣ್ಣಿಸಲಿ?
ನನಗವಳೆ ಜೀವ, ಅವಳೆನ್ನ ಜೀವನ…
– ಶ್ರೀನಿವಾಸ ನಾಯಕ್
Comments
Post a Comment