ಕೊಂಡಿ ಕಡಿಯುವ ಮುನ್ನ…
ಪ್ರೀತಿಯೆಂಬುವುದೊಂದು ಹಂಬಲದ ಹಸುಗೂಸು,
ಜತನವಿರಲಿ ಮಾತು ಮೌನವಾಗುವ ಮುನ್ನ.
ಸ್ವಾಭಿಮಾನದ ಹಮ್ಮು ಮನೆಮನದಹೊರಗಿರಿಸು,
ತಡ ಮಾಡದಿರು ಮೌನ ಮುನಿಸಾಗುವ ಮುನ್ನ.
ನೀನು ನಾನನು ಮೀರಿ ನಾವಾಗುವುದೇ ಬದುಕು,
ಅರಿತುಬಿಡು ನೀನೊಮ್ಮೆ ಮನದಿ ಮರುಗುವ ಮುನ್ನ.
ಪ್ರೀತಿಯಲಿ ಯುಗ ಕಳೆಯೆ ಕ್ಷಣದ ಸಂಯಮ ಬೇಕು,
ಸಾವರಿಸು ನೀ ಬೇರೆ ದಾರಿ ಹುಡುಕುವ ಮುನ್ನ.
ಭಿನ್ನಗಳ ಕಳಚಿಡಲು ಒಂದು ಬಿನ್ನಹ ಸಾಕು,
ಮರೆತುಬಿಡು ಮುನಿಸೊಮ್ಮೆ ಪ್ರೀತಿ ಸೋಲುವ ಮುನ್ನ.
ಸೋಲು ಗೆಲುವಿನ ಮೊಹರು ಪ್ರೀತಿಗೇತಕೆ ಬೇಕು?
ಮಾತಾಡಿಬಿಡು ಒಮ್ಮೆ ಕೊಂಡಿ ಕಡಿಯುವ ಮುನ್ನ.
– ಶ್ರೀನಿವಾಸ ನಾಯಕ್

Comments
Post a Comment