ನಿನ್ನ ನೆನಪು
ನಿನ್ನೊಲವಿನಾ ನೆನಪು ಇಬ್ಬನಿಯ ಹನಿಯಂತೆ,
ರವಿ ಕಿರಣ ಸೋಕಿದರೆ ಕರಗುವಂತೆ,
ಕರಗಿದರೂ ಮನದೊಳಗೆ ಭಾವಗಳ ಅಚ್ಚೊತ್ತಿ,
ಬಿರಿವ ಬೆಚ್ಚಗಿನೊಂದು ಕವನದಂತೆ…
ನಿನ್ನೊಲವಿನಾ ನೆನಪು ಮೂಡಣದ ರಂಗಂತೆ,
ಹೊತ್ತೇರಿ ಬರುವಾಗ ಮರೆಯಾಗುವಂತೆ,
ಮರೆಯಾದರೂ ಮನದಿ ಮೂಡಿದಾ ಬಣ್ಣಕ್ಕೆ,
ಕುಂಚವದ್ದಲು ಮೂಡೊ ಚಿತ್ರದಂತೆ…
ನಿನ್ನೊಲವಿನಾ ನೆನಪು ಸಾಗರದ ಅಲೆಯಂತೆ,
ನನ್ನೆದೆಯ ತೀರಕ್ಕೆ ಅಪ್ಪಳಿಸುವಂತೆ,
ಕಳೆದರೂ ಯುಗ ಹಲವು ಅಲೆಯ ಅಪ್ಪುಗೆಯಲ್ಲಿ,
ಕಡಲ ತೀರದ ಬಯಕೆ ತೀರದಂತೆ…
– ಶ್ರೀನಿವಾಸ ನಾಯಕ್

Comments
Post a Comment