ನೀನು?
ನೀನು ಮೌನದ ಹಾಡು ಮಾತು ಮರೆತಿರುವಾಗ
ಎದೆಯ ಭಾವನೆಗಳಿಗೆ ದನಿಯಾಗಲು
ನೀನು ಮನಸಿನ ಮಾತು ಮೌನ ಹಿತವಾದಾಗ
ಅಂತರಾಳವು ಮರಳಿ ತಿಳಿಯಾಗಲು
ನೀನು ಪ್ರೀತಿಯ ಪ್ರತಿಯು, ದ್ವೇಷ ತುಂಬಿದ ಜಗಕೆ
ಮುರಿದ ಮನಗಳು ಮತ್ತೆ ಒಂದಾಗಲು
ನೀನು ಕರುಣೆಯ ಕಡಲು, ಒಲವ ಬೇಡುವ ಜನಕೆ
ನೋವನಿಂಗಿಸಿ ಹೃದಯ ಹಗುರಾಗಲು
ನೀನು ಸ್ಪೂರ್ತಿಯ ಸೆಲೆಯು ನಿನ್ನೆ ನೆನಪಾದಾಗ
ಇಂದಿನಿರವನು ಅರಿತು ಮುದಗೊಳ್ಳಲು
ನೀನು ಭರವಸೆಯ ಬೆಳಕು ಕತ್ತಲೆಯು ಕವಿದಾಗ
ದಿವ್ಯ ಭವಿತವ್ಯಕ್ಕೆ ದಾರಿ ತೋರಲು.
– ಶ್ರೀನಿವಾಸ ನಾಯಕ್
Comments
Post a Comment