ಲಾಲಿ

 


ಜೋ…ಲಾಲಿ, ಜೋ….ಲಾಲಿ…||
ಜೋ ಲಾಲಿ ನನ ಕಂದ, ಮಧುರ ಮಕರಂದ,
ನಿನ್ನೊಲವ ಶ್ರೀಗಂಧ, ಮಹದಾನಂದ.

ಮುಗಿಲಂತೆ ಬಾಗಿಹುದು ಕಡೆಗಣ್ಣ ಕಪ್ಪು
ಕೋಲ್ಮಿಂಚು ಹೊಳೆದಂತೆ ನಿನ್ನ ಕಣ್ಣಂಚು.
ಬೆಣ್ಣೆಯಂತೆ ನುಣುಪು ನಿನ್ನೆರಡು ಕದಪು
ಬೊಚ್ಚು ಬಾಯಿಯ ನಗುವು ಬಲು ಅಚ್ಚುಮೆಚ್ಚು.
ಜೋ…ಲಾಲಿ, ಜೋ….ಲಾಲಿ…||

ಸೂರ್ಯನಂತೆ ನೀನು ಎದೆ ಬಾಂದಳದಲ್ಲಿ
ಜಗವೆಲ್ಲ ಎದ್ದಿಹುದು ನಿನ್ನ ಪ್ರಭೆಯಲ್ಲಿ.
ಚುಕ್ಕಿ ಚಂದ್ರರ ನೋಡು ಕಾಯುತಿಹರಲ್ಲಿ
ಕತ್ತಲಾಗಲಿ ಮಲಗು ಚಂದಿರನು ಬರಲಿ.
ಜೋ…ಲಾಲಿ, ಜೋ….ಲಾಲಿ…||

ಬೆಳ್ಳಿ ಬೆಳದಿಂಗಳು,‌ ತಂಬೆಲರು ಸುಳಿದು,
ಸೋನೆ ಮಳೆಹನಿಗಳು ಹಿತವಾಗಿ ಸುರಿದು,
ಸುಖನಿದ್ರೆ, ಸವಿಗನಸು ನಿನಗೊಲಿಯಲೆಂದು,
ಬೇಡುವೆನು ಶ್ರೀಹರಿಯ ಹರಸಲಿ ಎಂದೆಂದೂ.
ಜೋ…ಲಾಲಿ, ಜೋ….ಲಾಲಿ…||

– ಶ್ರೀನಿವಾಸ ನಾಯಕ್

Comments

Popular posts from this blog