ಕೆಲವು ಕವನಗಳೇ ಹಾಗೆ…

 

ಕೆಲವು ಕವನಗಳೇ ಹಾಗೆ,ಯಾರ ಅಪ್ಪಣೆಗೂ ಕಾಯದೆ,
ಹೃದಯದೊಳಕ್ಕೆ ನುಗ್ಗಿ ಸ್ವಂತವಾದಂತೆ…
ಎದೆಗೂಡಿನ ಚಿಪ್ಪಿನೊಳಗೆ, ಮುದುಡಿ ಮಲಗಿರುವ,
ಬೆಚ್ಚನೆ ಭಾವಗಳನ್ನು ಬಗೆದು ತೆಗೆದಂತೆ…

ಬರೆದ ಕವಿ ಯಾರೋ? ಯಾರ ಬದುಕಿನ ಸಾಲೋ?
ಯಾವ ಘಳಿಗೆಯ ತುಡಿತ, ತುಮುಲ-ತೊಳಲಾಟವೋ?
ಯಾರು ತೋರಿದ ಒಲವೋ? ಯಾರ ನಂಟಿನ ಕವಲೋ?
ಯಾರ ಮನಸಿನ ಮಾತು, ಮೌನ-ಮಮಕಾರವೋ?

ಯಾವ ಹಿನ್ನೆಲೆಯೋ? ಯಾರು ಸ್ಪೂರ್ತಿಯೋ? ಕವಿಗೆ
ಈ ಕ್ಷಣಕೆ ಈ ಕವನ ನಮ್ಮದಾದಂತೆ…
ಬರೆದ ಪದಗಳ ಭಾವ, ಮೆಲ್ಲ ಎದೆಯೊಳಗಿಳಿದು,
ನೆನಪುಗಳಿಗಿನ್ನೊಮ್ಮೆ ಜೀವ ಬಂದಂತೆ…

– ಶ್ರೀನಿವಾಸ ನಾಯಕ್

Comments

Popular posts from this blog