ಬಾಳ ಬೆಳಕು…
ಮಗುವೆ ನಿನ್ನ ನಗುವೆ ನನ್ನ, ಬಾಳ ಹಾಡ ಪಲ್ಲವಿ,
ನೀನೆ ನನ್ನ ಮನವ ಮೀಟಿ ಭಾವ ತೆರೆದ ಭೈರವಿ.
ನಿನ್ನ ಸನಿಹ ಸಿಗುವ ಒಲವೆ ಉಸಿರು ನನ್ನ ಜೀವಕೆ,
ನನ್ನ ಬದುಕಿನಿರುಳಿನಲ್ಲಿ ನೀನೆ ಚೆಲುವ ಚಂದ್ರಿಕೆ.
ತೊದಲು ಮಾತೇ ನವವಸಂತ ನನ್ನ ಬಾಳ ಬಳ್ಳಿಗೆ,
ನಗುವ ಸಪ್ತಸ್ವರವೆ ರಾಗ, ಮನದ ಮೌನಗೀತೆಗೆ.
ನಗುವಿನಲ್ಲೇ ಮೌನ ಮೀಟಿ ತೆರೆದೆ ಮನದ ಭಾವನೆ,
ನಿನಗೆ ಹೇಗೆ ಹೇಳಲೆನ್ನ ಮೂಕಹಕ್ಕಿ ವೇದನೆ?
ನಿನ್ನ ಹೊರತು ನನಗೆ ಬದುಕು, ಜೀವವಿರದ ದೇಹವು,
ನನ್ನ ಮರೆತು ನಿನಗೆ ಜಗವು ಕವಲು ದಾರಿ ನಡಿಗೆಯು.
ನೀನು ನನಗೆ ನೋವ ಮರೆಯೆ ದೇವನಿತ್ತ ಕಾಣಿಕೆ,
ಬಾಲ್ಯದೊಡಲು ಬದಲದಿರಲಿ, ಇದುವೆ ನನ್ನ ಬೇಡಿಕೆ.
ಮನದಿ ನೆಲೆಸಿ ನೋವ ಮರೆಸಿ ಪ್ರೀತಿ ಹೊನಲ ಹರಿಸಿದೆ
ಬರಡು ಬದುಕಿನಿಡಲಿನಲ್ಲೂ ನಗುವಿನೊರತೆ ಚಿಮ್ಮಿದೆ
ದೈವ ರಕ್ಷೆಯಿರಲಿ ಮಗುವೆ ನಿನ್ನ ಮಧುರ ಬಾಳಿಗೆ,
ಹೂವ ಹಾಸಿ ಹರಸುತಿರುವೆ ಸಾರ್ಥಕತೆಯ ಹಾದಿಗೆ.
– ಶ್ರೀನಿವಾಸ ನಾಯಕ್
Comments
Post a Comment