ಎಲ್ಲಿರುವೆ ನನ್ನಿನಿಯ…
ಎಲ್ಲಿರುವೆ ನನ್ನಿನಿಯ, ಕೇಳದೆನ್ನಯ ಮೊರೆಯ
ಮಿಡಿದ ಮನಸಿನ ಮಧುರ-
ಮೌನ ಮಮತೆಯ ಕರೆಯ…
ನಾನರಿಯೆ ನನ್ನೊಳಗೆ ಯಾಕಿಂಥ ಕಸಿವಿಸಿಯು,
ನಿನ್ನೆ ಮೊನ್ನೆಯವರೆಗೆ ಇರದ ಭಾವನೆಯು.
ಎದೆಯೊಳಡಗಿಹ ಪ್ರೀತಿ ಮನಸಿಗಂಟಿತು ಎಂದೋ?
ಹರೆಯ ತುಂಬಿರುವುದಕೆ ಇದುವೆ ಸೂಚನೆಯೋ?
ನೀನಾರೊ ತಿಳಿದಿಲ್ಲ, ಇಹಪರವನರಿತಿಲ್ಲ,
ನೀನು ನೀನಾಗಿರಲಷ್ಟೆ ಸಾಕು.
ಬರಿದೆ ಬೇಡಿಕೆಯಿಲ್ಲ, ಸಿರಿತನದ ಹಮ್ಮಿಲ್ಲ,
ಅನುದಿನವು ನೀನೆನ್ನ ಜೊತೆಗಿರಲು ಬೇಕು.
ಹೂಬನದ ಹೊಸಿಲಿನಲಿ ಭಾವಪರವಶಳಾಗಿ,
ಸಡಗರದಿ ಸಿಂಗರಿಸಿ ಕಾಯುತಿಹೆ ನಿನಗೆ.
ಬೆರಳ ಸಂದಿಗಳಲ್ಲಿ ನಿನ್ನ ಕೈಗಳ ಬೆಸೆದು,
ಬರುವ ಬಾಳಿನ ದಾರಿ ನಡೆಯೆ ಜೊತೆಗೆ.
– ಶ್ರೀನಿವಾಸ ನಾಯಕ್

Comments
Post a Comment