ಯಾರೆ ನೀನು ಚೆಲುವೆ?
ನಡೆವ ದಾರಿಯ ನಡುವೆ, ಗಮನವನು ಸೆಳೆದವಳ,
ತಿರುಗಿ ನೋಡಲು ಮನಸು ಕರೆದಂತಿದೆ…
ಅವಳ ಮುಖ ಕಂಡಾಗ ತೆರೆದ ಕವಿ ಕಣ್ಣುಗಳ,
ಚೆಲುವ ಬರಗಾಲವು ಮುಗಿದಂತಿದೆ…
ಹಣೆಯ ಮೇಲಾಡುತಿಹ ಆ ತುಂಟ ಮುಂಗುರುಳು,
ತುದಿ ಬೆರಳ ಸ್ಪರ್ಶವನು ಸೆಳೆವಂತಿದೆ…
ತುಸು ತೆರೆದ ತುಟಿ ಮೇಲೆ ಬರಲೊಂದು ನಗೆಮುಗುಳು,
ಬಾಯ ಬಾಗಿಲ ಬಳಿಯೆ ನಿಂತಂತಿದೆ…
ಬಿರಿದ ಕಂಗಳ ನೋಟ ಕಣ್ಣೆವೆಯ ಕದ ತೆರೆದು,
ಏನನೋ ಅರಸುತ್ತ ಹೊರಟಂತಿದೆ…
ಬೆಳಕಿನುಂಗುರವೊಂದು ಕೆನ್ನೆಗುಳಿಯೊಳಗಿಳಿದು,
ನಾಚಿ ಕೆಂಪೇರಲು ಕಾದಂತಿದೆ…
ಹುಣ್ಣಿಮೆಯ ಹೊನಲೆಂದು ಮೇಲೆ ನೋಡಿದರಲ್ಲಿ,
ಚಂದಿರನೆ ಬಾಂದಳವ ತೊರೆದಂತಿದೆ…
ಅವಳ ಚೆಲುವಿಗೆ ಸೋತು ಮೈಮರೆತ ಮನದಲ್ಲಿ,
ಭಾವಲೋಕದ ಕೋಟೆ ತೆರೆದಂತಿದೆ…
– ಶ್ರೀನಿವಾಸ ನಾಯಕ್
Comments
Post a Comment