ಇಳಿಸಂಜೆ ಸಮಯದಲಿ…

 


ಇಳಿಸಂಜೆ ಸಮಯದಲಿ, ಕಳೆದು ಹೋದವ ನೀನು,
ಮರಳಿ ಮನಸಿಗೆ ಬರುವ ದಾರಿ ಮರೆತು…
ನಿನ್ನ ನೆನಪಲಿ ಮುಳುಗಿ ಕಳೆದೆನಿರುಳನು ನಾನು,
ಬರುವ ಭರವಸೆಯಿಂದ ಕಾದು ಕುಳಿತು…

ಯಾವ ಕಹಿ ಘಳಿಗೆಯದು? ಮೀರಿ ಸಂಯಮದೆಲ್ಲೆ,
ನಮ್ಮೊಲವಿಗೊಂದಿನಿತು ಘಾಸಿಯಾಗಿ…
ಮುನಿಸಿ ನಡೆದರೆ ಹೇಗೆ? ಗಾಯ ಮಾಯುವ ಮೊದಲೇ,
ಕೊಂಚ ಕಾಯುವ ಸಹನೆ‌ ಇರದೆ ಹೋಗಿ…

ಕಡೆತನಕ ಕಾಯುವೆನು ಎಂಬ ಭಾಷೆಯನಿತ್ತು,
ಮುತ್ತನೊತ್ತಿದ ನೆನಪು ಕಾಡುತಿಹುದು…
ಒಂದು ಬೆಚ್ಚಗಿನೊಲವ ಬಿಗಿಯಪ್ಪುಗೆಯನಿತ್ತು,
ಸಂತಯಿಸಲೆಂದು ಮನ ಬಯಸುತಿಹುದು…

ಕರಗಿ ಕತ್ತಲ ರಾತ್ರಿ ಬೆಳಗಾಗುತಿದೆ ನೋಡು,
ನಿನ್ನದೇಕೋ ಇನ್ನೂ ಸುಳಿವೇ ಇಲ್ಲ.
ಹೊತ್ತು ಮೀರುವ ಮುನ್ನ, ದಯವಿಟ್ಟು ಬಂದುಬಿಡು,
ದೂರವಾಗುವುದೊಂದೇ ದಾರಿಯಲ್ಲ.

– ಶ್ರೀನಿವಾಸ ನಾಯಕ್

Comments

Popular posts from this blog